ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬಾರಮಣ ನಿನ್ನ ನಂಬಿದೆ||
ತುಂಬಿದ ಹರಿಗೋಲಂಬಿಗಾ
ಅದಕೊಂಭತ್ತು ಛಿದ್ರನೋಡಂಬಿಗಾ
ಸಂಭ್ರಮದಿಂದ ನೀನಂಬಿಗಾ
ಅದರಿಂಬು ನೋಡಿ ನಡೆಸಂಬಿಗಾ ||1||
ಹೊಳೆಯ ಭರವ ನೋಡಂಬಿಗಾ
ಅದಕ್ಕೆ ಸೆಳವು ಘನವಯ್ಯ ಅಂಬಿಗಾ
ಸುಳಿಯೊಳು ಮುಳುಗಿದೆನಂಬಿಗಾ
ಎನ್ನ ಸೆಳೆದುಕೊಳ್ಳಯ್ಯಾ ನೀನಂಬಿಗಾ ||2||
ಆರು ತೆರೆಯ ನೋಡಂಬಿಗಾ
ಅದು ಮೀರಿ ಬರುತಲಿದೆ ಅಂಬಿಗಾ
ಯಾರಿಂದಲಾಗದು ಅಂಬಿಗಾ
ಅದ ನಿವಾರಿಸಿ ದಾಟಿಸೊ ಅಂಬಿಗಾ ||3||
ಹೊತ್ತುಹೋಯಿತು ನೋಡಂಬಿಗಾ
ಅಲ್ಲಿ ಮತ್ತೈವರೀರ್ವರು ಅಂಬಿಗಾ
ಒತ್ತಿ ನಡೆಸಿ ನೋಡಂಬಿಗಾ
ಎನ್ನ ಸತ್ಯ ಲೋಕಕೆ ಒಯ್ಯೊ ಅಂಬಿಗಾ ||4||
ಸತ್ಯವೆಂಬುದೆ ಹುಟ್ಟಂಬಿಗಾ
ಸದಾ ಭಕ್ತಿಎಂಬುದೆ ಪಥವಂಬಿಗಾ
ಮುಕ್ತಿದಾಯಕ ನಮ್ಮ ಪುರಂದರ ವಿಠ್ಠಲನ
ಮುಕ್ತಿಮಂಟಪಕೊಯ್ಯೊ ಅಂಬಿಗಾ||5||
................................................................................
No comments:
Post a Comment