ಹಾಡಲು ಕಲಿಯಿರಿ(CLICK HERE TO LEARN THIS SONG)
ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು
ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು||
ಬೃಂದಾವನದ ಹಣೆಗೆ ಕುಂಕುಮವನಿಡುವಾಗ
ಕಾಣುವುವು ಶ್ರೀತುಳಸಿ ಕೃಷ್ಣತುಳಸಿ
ನೀಲಾಂಬರನ ನಡುವೆ ಚಂದಿರನು ಬಂದಾಗ
ರೋಹಿಣಿಯು ಬೆಳಗುವಳು ಸನ್ನಿಧಿಯಲಿ||1||
ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ
ಇನ್ನು ತಂಗಿಯ ಮದುವೆ ತಿಂಗಳಿಹುದು
ತೌರಪಂಜರದೊಳಗೆ ಸೆರೆಯಾದ ಗಿಳಿಯಲ್ಲ
ಐದು ತಿಂಗಳ ಕಂದ ನಗುತಲಿಹುದು||2||
ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
ಮೈಸೂರ ಸೇರುವುದು ನಾನು ಬಲ್ಲೆ
ನಾಳೆ ಮಂಗಳವಾರ ಮಾರನೆಯ ದಿನ ನವಮಿ
ಆಮೇಲೆ ನಿಲ್ಲುವೆನೇ ನಾನು ಇಲ್ಲಿ
ಮರೆತಿಹಳು ಎನ್ನದಿರಿ ಕಣ್ಮರೆಯ ತೋಟದಲಿ
ಅಚ್ಚ ಮಲ್ಲಿಗೆ ಹೂವು ಅರಳು ಬಿರಿಯುತಿಹುದು
ಬಂದುಬಿಡುವೆನು ಬೇಗ ಮುನಿಯದಿರಿ ಕೊರಗದಿರಿ
ಚುಚ್ಚದಿರಿ ಮೊನೆಯಾದ ಮಾತನೆಸೆದು||3||
..................................
Also see:
No comments:
Post a Comment