ವಿದ್ಯೆ ಕಲಿಸದ ತಂದೆ । ಬುದ್ಧಿ ಹೇಳದ ಗುರುವು ।
ಬಿದ್ದಿರಲು ಬಂದ ನೋಡದಾ ತಾಯಿಯೂ ।
ಶುದ್ಧ ವೈರಿಗಳು ಸರ್ವಜ್ಞ||
ಸರ್ವಜ್ಞನೆಂಬುವನು ಗರ್ವದಿಂದಾದವನೇ?
ಸರ್ವರೊಳಗೊಂದೊಂದು ನುಡಿಗಲಿತು ವಿದ್ಯೆಯ
ಪರ್ವತವೇ ಆದ ಸರ್ವಜ್ಞ||
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿ೦ಗೆ
ಕೊಟ್ಟಿದ್ದು ಕೆಟ್ಟಿತ್ತೆನಬೇಡ ಮುಂದಕ್ಕೆ
ಕಟ್ಟಿಹುದು ಬುತ್ತಿ ಸರ್ವಜ್ಞ॥
ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ
ಜಾತಿ ವಿಜಾತಿ ಎನಬೇಡ ದೇವನೊಲಿ
ದಾತನೇ ಜಾತ ಸರ್ವಜ್ಞ ॥
ಆಗ ಬಾ ಈಗ ಬಾ ಹೋಗಿ ಬಾ ಎನ್ನದೆಲೆ
ಆಗಲೇ ಕರೆದು ಕೊಡುವನ ಧರ್ಮ
ಹೊನ್ನಾಗದೆ ಬಿಡದು ಸರ್ವಜ್ಞ॥
ನಡೆವುದೊಂದೇ ಭೂಮಿ ಕುಡಿಯುವುದೊಂದೇ ನೀರು
ಸುಡುವಗ್ನಿಯೊ೦ದೇ ಇರುತಿರಲು ಕುಲ
ಗೋತ್ರ
ನಡುವೆ ಎತ್ತಣದು ಸರ್ವಜ್ಞ॥
ಕೋಪವೆಂಬುದು ತಾನು ಪಾಪದಾ ನೆಲೆಗಟ್ಟು
ಆಪತ್ತು ಸುಖವು ಸರಿಯೆಂದು ಕಾಂಬವಗೆ
ಪಾಪವೆಲ್ಲಿಹುದು ಸರ್ವಜ್ಞ ॥
No comments:
Post a Comment