Jul 8, 2025

ಮಂಕುತಿಮ್ಮನ ಕಗ್ಗ ಅರ್ಥ | MANKUTIMMANA KAGGA |DVG | KANNADA SAVIGANA LYRICS


ನೂರಾರು ಮತವಿಹುದು ಲೋಕದುಗ್ರಾಣದಲಿ

ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್

ಸಾರದಡುಗೆಯನೊಳವಿಚಾರದೊಲೆಯಲಿ ಮಾಡು

ಬೇರೆ ಮತಿ ಬೇರೆ ಮತ ಮಂಕುತಿಮ್ಮ

 

ಲೋಕದ ಉಗ್ರಾಣದಲ್ಲಿ ನೂರಾರು ಮತಗಳಿರುವವು. ಅದರಲ್ಲಿ ನಿನ್ನ ಮನಸ್ಸಿಗೆ ಒಪ್ಪುವುದನ್ನು ಆರಿಸಿಕೊ. ವಿಚಾರದ ಒಲೆಯಲ್ಲಿ ಅನುಭವದ ಅಡುಗೆ ಮಾಡು .ಮತಿಯಂತೆ ಮತವಿರುವುದು.

....................................................................................................................................................

ರಾಮನಿರ್ದಂದು ರಾವಣನೊಬ್ಬನಿರ್ದನಲ
ಭೀಮನಿರ್ದಂದು ದುಶ್ಶಾಸನನದೊರ್ವನ್
ಮಹಿಯೊಳನ್ಯಾಯಕಾರಿಯಿಲ್ಲದುದೆಂದು?
ರಾಮಭಟನಾಗು ನೀಂ - ಮಂಕುತಿಮ್ಮ

ರಾಮನಿದ್ದ ಕಾಲದಲ್ಲಿಯೇ ರಾವಣ ಎಂಬುವನು ಒಬ್ಬನಿದ್ದ, ಹಾಗೆಯೇ ಭೀಮ ಇದ್ದ ಕಾಲದಲ್ಲಿಯೇ ದುಶ್ಯಾಸನ ಎಂಬುವನು ಇದ್ದನು. ಭೂಮಿಯಲ್ಲಿ ಅನ್ಯಾಯಕಾರಿ ವ್ಯಕ್ತಿ ಇಲ್ಲದದು ಎಂದು? ನೀನು ರಾಮನಾಗದಿದ್ದರೂ ಪರವಾಗಿಲ್ಲ, ರಾಮಭಂಟನಾಗು

...................................................................................................................................................

ಆಶೆಗಳ ಕೆಣಕದಿರು ಪಾಶಗಳ ಬಿಗಿಯದಿರು

ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು

ಬೇಸರದ ಪಾತಕ ಸ್ಮೃತಿಯ ಚುಚ್ಚದಿರೆನ್ನು

ತೀಶನನು ಬೇಡುತಿರೊ ಮಂಕುತಿಮ್ಮ

ದೇವನೇ, ನನ್ನ ಆಸೆಗಳನ್ನು ಕೆಣಕಬೇಡ. ಆಶಾಪಾಶಗಳ ಬಿಗಿಯಬೇಡ. ಕಠಿಣವಾದ ಪರೀಕ್ಷೆಗಳಿಗೆ ನನ್ನನ್ನು ಒಡ್ಡಬೇಡ. ಕೆಟ್ಟ ನೆನಪು ನೀಡಿ ಕಾಡಬೇಡ ಎಂದು ಸದಾ ದೇವರಲ್ಲಿ ಮೊರೆಯಿಡು.

........................................................................................................................................

ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ

ಮಾನವನಿಗೆ ನಗುವು ಸಹಜವಾದ ಧರ್ಮ. ಅನ್ಯರನ್ನು ನಗಿಸುವುದು ಪರಧರ್ಮ. ನಗುವನ್ನು ಕೇಳಿ ನಗುವುದು ಅತಿಶಯ ಧರ್ಮ .ಆದುದರಿಂದ ದೇವರಲ್ಲಿ ನಗುವ ನಗಿಸುವ ನಗಿಸಿ ನಗುತ ಬಾಳುವವರನ್ನು ನೀನು ಬೇಡಿಕೋ.

..............................................................................................................................................

No comments:

Post a Comment