ಆಲದ ನೆಳಲಾಗು
ಅಶ್ವತ್ಥ ನೆಳಲಾಗು
ಗೋಕರ್ಣದ ಗೋಳಿ
ನೆಳಲಾಗು
ಕಂದಯ್ಯ ನೆಳಲಾಗು
ನಮ್ಮ ಮನೆಗೆಲ್ಲ॥
ಆರೋಗ್ಯ ಹೆಚ್ಚಲಿ
ಅಪಮೃತ್ಯು ತೊಲಗಲಿ
ಯಾರೂ ಕಂಡರೂ ಹರಸ..ಲಿ
ಕಂದಯ್ಯಗೆ
ದೀರ್ಘಾಯುಸ್ಸೆಂಬ ಹರಕೇಯ॥
ಯಾರೂ ಇಲ್ಲದ ಕಷ್ಟ
ದಾರಿಯ ಮನೆ ಕಷ್ಟ
ದಾರಿದ್ರ್ಯ ದು:ಖ
ಬಹುಕಷ್ಟ।
ಕಂದಯ್ಯ ಇವು ಮೂರು
ಬಾರಾದಿರಲಿ ನಿನ್ನ ಬಳಗಕ್ಕೆ॥
ಮಕ್ಕಳಿಗೆ ತಾಯಾಸೆ
ಪಕ್ಷಿಗೆ ಗೂಡಾಸೆ
ಬಿತ್ತಿದ ಬೆಳೇಗೆ
ಮಳೆಯಾಸೆ
ಕಂದಯ್ಯ ನಿನ್ನಾಸೆ
ನಮ್ಮ ಬಳಗಕ್ಕೆ॥
ಪ್ರೀತಿಯ ಮಗನಾಗು
ನೀತೀಲಿ ಗುರುವಾಗು
ಖ್ಯಾತೀಲಿ
ಧರ್ಮಜನಾಗು।
ಕಂದಯ್ಯ ಜ್ಯೋತಿಯಾಗಿ
ಮನೆಯ ಬೆಳಗಯ್ಯ॥
ಮುದ್ದು ನೀ ಅಳದೀರು
ಎದಾಗ ಉಣಬಹುದು
ನಿದ್ದೆ ಬಂದಾಗ
ಪವಡೀಸು|
ಕಂದಯ್ಯ ಶ್ರೀಕೃಷ್ಣ
ದೇವರು ಬುದ್ದಿ ಕೊಟ್ಟಗ ನಡೆದಾಡು॥
ಆಯುಷ್ಯಳ್ಳ ಈ ಪಟ್ಟೇಯ
ಯಾರುಕೊಟ್ರು ಕಂದಯ್ಯಗೆ
ದೇವೇಂದ್ರ ಕೊಟ್ಟ ಶಿವ
ಕೊಟ್ಟಾ
ಈ ಪಟ್ಟೇಯ ಕಾರು
ಕೇಳಿದರೂ ಕೊಡದೀರು॥
ಯಾರು ಇದ್ದರು ಮಗುವೆ
ತಾಯಿ ಇದ್ದಾಗಲ್ಲ
ಹತ್ತಿದ ಕೊಲ್ಲಿ
ಒಲೆಯೊಳಗೆ ಉರಿದರೆ
ದೀವಿಗೆ ಉರಿದಷ್ಟು
ಬೆಳಕಲ್ಲ॥
ನೆಳಲಾಗು ಮಲ್ಲಿಗೆ
ನೆಳಲಾಗು ಸಂಪಿಗೆ
ನೆಳಲಾಗು
ಬಾಗಿಲಶ್ವತ್ಥ
ಕಂದಯ್ಯ ಕೇಳಿದರೆ
ಮುತ್ತ ಕಟ್ಟಿಸುವೆ ಎಲೆಗೊಂದ॥
ತಾಯಿ ಇದ್ರೆ ತವರೂರು
ನೀರಿದ್ರೆ ಕೆರೆ ಬಾವಿ
ಆನೆ ಕಟ್ಟಿದರೆ ಅರಮನೆ
ಕಂದಯ್ಯ
ರಾಜ್ಯವಾಳಿದರೆ ದೊರೆತಾನ॥
………………………………………………………………...............................................
No comments:
Post a Comment