Aug 18, 2025

ನಿನ್ನ ಒಲುಮೆಯಿಂದ ನಿಖಿಳ ಜನರು SONG LYRICS |NINNA OLUMEYINDA | DASARA PADA

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ವಿಜಯ ವಿಠಲ ದಾಸರು

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ

ಎನ್ನ ಪುಣ್ಯಗಳಿಂದ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ||

 

ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಊರ್ಣ ವಿಚಿತ್ರ ವಸನ

ವರ್ಣವರ್ಣದಿಂದ ಬಾಹೋದೇನೊ ಸಂಪೂರ್ಣ ಗುಣಾರ್ಣವ ದೇವಾ |

ಸಂಜೀತನಕ ಇದ್ದು ಸಣ್ಣ ಸವಟು ತುಂಬ ಗಂಜಿ ಕಾಣದೆ ಬಳಲಿದೆನೊ

ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ ಭುಂಜಿಸುವದು ಮತ್ತೇನೋ ||1||

 

ಒಬ್ಬ ಹೆಂಗಸಿಗೆ, ಅನ್ನ ಹಾಕುವದಕ್ಕೆ, ತಬ್ಬಿಬ್ಬುಗೊಂಡೆ ನಾ ಹಿಂದೆ

ನಿಬ್ಬರದಲಿ ಸರ್ವರ ಕೂಡಿನ್ನು ,ಹಬ್ಬವನುಂಡೆನೊ ಹರಿಯೆ|

ಮನೆಮನೆ ತಿರುಗಿದೆ ಕಾಸು ಪುಟ್ಟದೆ ಸುಮ್ಮನೆ ಜಾಲವರಿದು ಬಾಹೇನು

ಹಣ ಹೊನ್ನು ದ್ರವ್ಯ ಒಮ್ಮಿಂದೊಮ್ಮೆ ಈಗ  ಎನಗೆ ಪ್ರಾಪುತಿ ನೋಡೋ ಜೀಯ ||2||

 

ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯದಾದೆ

ಧರೆಯೊಳು ಸತ್ಪಾತ್ರರಿಗುಣಿಸುವ ಪದ್ಧತಿ ನೋಡೊ ಧರ್ಮಾತ್ಮ

ನೀಚೋಚ್ಛ ತಿಳಿಯದೆ ಸರ್ವರ ಚರಣಕೆ ಚಾಚಿದೆ ನೊಸಲು ಹಸ್ತಗಳ

ಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕೆ ನಿಲುಕದೊ ಹರಿಯೆ ||3||

 

ವೈದಿಕ ಪದವಿಯ ಕೊಡುವನಿಗೆ ಲೌಕಿಕನೈದಿಸುವುದು ಮಹಾಖ್ಯಾತಿ

ಮೈದುನಗೊಲಿದ ಶ್ರೀ ವಿಜಯವಿಠಲ ನಿನ್ನ ಪಾದ ಸಾಕ್ಷಿ ಅನುಭವವೊ

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ

ಎನ್ನ ಪುಣ್ಯಗಳಿಂದ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ||4||

....................................................................................

 


No comments:

Post a Comment