ಹಾಡಲು ಕಲಿಯಿರಿ(CLICK HERE TO LEARN THIS SONG)
ಕನಕದಾಸರಿಂದ ರಚಿತವಾದ
ದಶಾವತಾರದ ಪದ
ದೇವಿ ನಮ್ಮ ದ್ಯಾವರು
ಬಂದರು ಬನ್ನೀರೆ, ನೋಡ ಬನ್ನಿರೆ ||ಪ||
ಕೆಂಗಣ್ಣ ಮೀನನಾಗಿ ನಮ
ರಂಗ ಗುಂಗಾಡು ಸೋಮನ ಕೊಂದಾನ್ಮ್ಯಾ|
ಗುಂಗಾಡು ಸೋಮನ ಕೊಂದು
ವೇದವ ಬಂಗಾರದೊಡಲನಿಗಿತ್ತಾನ್ಮ್ಯಾ||1||
ದೊಡ್ಡ ಮಡುವಿನೊಳಗೆ
ನಿಂತು ನಮ ರಂಗ ಗುಡ್ಡವ ಹೊತ್ಕೊಂಡು ನಿಂತಾನ್ಮ್ಯಾ|
ಗುಡ್ಡವ ಹೊತ್ಕೊಂಡು
ನಿಂತು ಸುರರನು ದೊಡ್ಡವರನ್ನ ಮಾಡ್ಯಾನ್ಮ್ಯಾ ||2||
ಚೆನ್ನ ಕಾಡಿನ
ಹಂದಿಯಾಗಿ ನಮ ರಂಗ ಚಿನ್ನದ ಕಣ್ಣನ ಕೊಂದಾನ್ಮ್ಯಾ
ಚಿನ್ನದ ಕಣ್ಣನ ಕೊಂದು
ಭೂಮಿಯ ವನ್ನಜ ಸಂಭವಗಿತ್ತಾನ್ಮ್ಯಾ ||3||
ಸಿಟ್ಟಿಲಿಂದ
ಸಿಂಹನಾಗಿ ನಮ ರಂಗ ಹೊಟ್ಟೆಯ ಕರುಳ ಬಗೆದಾನ್ಮ್ಯಾ |
ಹೊಟ್ಟೆಯ ಕರುಳ ಹಾರವ
ಮಾಡಿ ಪುಟ್ಟಗೆ ವರವ ಕೊಟ್ಟಾನ್ಮ್ಯಾ||4||
ಹುಡುಗ ಹಾರುವನಾಗಿ ನಮ
ರಂಗ ಬೆಡಗಲಿ ಮುಗಿಲಿಗೆ ಬೆಳೆದಾನ್ಮ್ಯಾ|
ಬೆಡಗಲಿ ಮುಗಿಲಿಗೆ
ಬೆಳೆದು ಬಲಿಯನ್ನ ಅಡಿಯಿಂದ ಪಾತಾಳಕೊತ್ತ್ಯಾನ್ಮ್ಯಾ|| 5||
ತಾಯ ಮಾತನು ಕೇಳಿ
ಸಾಸಿರ ತೋಳಿನ ಆವಿನ ಕಳ್ಳನ ಕೊಂದಾನ್ಮ್ಯಾ|
ಆವಿನ ಕಳ್ಳನ ಕೊಂದು
ಭೂಮಿಯ ಅವನಿಸುರರಿಗೆ ಇತ್ತಾನ್ಮ್ಯಾ|| 6||
ಪಿಂಗಳ ಕಣ್ಣಿನ
ಕೊಂಗಗಳ ಕೂಡಿ ಛಂಗನೆ ಲಂಕೆಗೆ ಪೋದಾನ್ಮ್ಯಾ|
ಛಂಗನೆ ಲಂಕೆಗೆ ಪೋಗಿ
ನಮ ರಂಗ ಹೆಂಗಸುಗಳ್ಳನ ಕೊಂದಾನ್ಮ್ಯಾ||7||
ಕರಿಯ ಹೊಳೆಯ ಬಳಿ
ತುರುಗಳ ಕಾಯುತ ಉರಗನ ಮಡುವ ಧುಮುಕ್ಯಾನ್ಮ್ಯಾ|
ಉರಗನ ಹೆಡೆ ಮೇಲೆ
ಹಾರ್ಹಾರಿ ಕುಣಿವಾಗ ನಾರೇರ್ಗೆ ವರವ ಕೊಟ್ಟಾನ್ಮ್ಯಾ ||8||
ಭಂಡನಂದದಿ ಕುಂಡೆಯ ಬಿಟುಗೊಂಡು ಕಂಡ ಕಂಡಲ್ಲಿಗೆ ತಿರುಗ್ಯಾನ್ಮ್ಯಾ|
ಕಂಡ ಕಂಡಲ್ಲಿಗೆ ತಿರುಗಿ ತ್ರಿಪುರರ ಹೆಂಡಿರನೆಲ್ಲ ಕೆಡಿಸ್ಯಾನ್ಮ್ಯಾ ||9||
ಚೆಲುವ ಹೆಂಡತಿಯ ಕುದುರೆಯ ಮಾಡಿ ಒಳ್ಳೆಯ ರಾಹುತನಾದಾನ್ಮ್ಯಾ|
ಒಳ್ಳೆಯ ರಾಹುತನಾಗಿ ಮ್ಲೇಚ್ಛರಡೊಳ್ಳು ಹೊಟ್ಟೆಯ ಮ್ಯಾಲೆ ಒದ್ದಾನ್ಮ್ಯಾ ||10||
ಡೊಳ್ಳಿನ ಮ್ಯಾಲ್ ಕೈಯ
ಭರಮಪ್ಪ ಹಾಕ್ಯಾನ ತಾಳವ ಶಿವನಪ್ಪ ತಟ್ಟಾನ್ಮ್ಯಾ|
ಒಳ್ಳೊಳ್ಳೆ ಪದಗಳ
ಹನುಮಪ್ಪಾ ಹಾಡ್ಯನ ಚೆಲುವ ಕನಕಪ್ಪ ಕುಣಿದಾನ್ಯ ||11||
No comments:
Post a Comment